ಬಲರಾಮ
ಶ್ರೀಕೃಷ್ಣನ ಅಣ್ಣ. ವಸುದೇವನಿಂದ ದೇವಕಿಯ ಗರ್ಭವನ್ನು ಪ್ರವೇಶಿಸಿ, ಅನಂತರ ಮಾಯೆಯಿಂದ ರೋಹಿಣಿಯ ಗರ್ಭಕ್ಕೆ ಸಂಕ್ರಮಿಸಿ ಜನಿಸಿದವ. ಹೀಗೆ ಒಂದು ಗರ್ಭದಿಂದ ಮತ್ತೊಂದು ಗರ್ಭಕ್ಕೆ ಸಂಕ್ರಮಿಸಿದವನಾದ ಕಾರಣ ಸಂಕರ್ಷಣನೆಂತಲೂ ಹೆಚ್ಚು ಬಲವುಳ್ಳವನಾದ ಕಾರಣ ಬಲರಾಮನೆಂತಲೂ ಇವನ ಆಯುಧಗಳಾದ ಒನಕೆ ಮತ್ತು ನೇಗಿಲಿನಿಂದಾಗಿ ಮುಸಲು ಹಲಿ ಎಂತಲೂ, ನೀಲಿ ಪಟ್ಟೆ ಈತನಿಗೆ ಪ್ರಿಯವಾದ ಕಾರಣ ನೀಲಾಂಬರನೆಂತಲೂ ರೋಹಿಣಿಯ ಮಗನಾದ ಕಾರಣ ರೌಹಿಣೀಯನೆಂತಲೂ ಈತನನ್ನು ಕರೆವುದಿದೆ. ಈತ ಆದಿಶೇಷನ ಅವತಾರ. ಗೋಕುಲದಲ್ಲಿ ಕೃಷ್ಣನೊಡನೆ ಇದ್ದಾಗ ಧೇನುಕನೆಂಬ ರಾಕ್ಷಸನನ್ನು ಕೊಂದ. ಪ್ರಲಂಬಾಸುರನನ್ನು ವಧಿಸಿದ. ಸಾಂದೀಪಿನಿ ಗುರುಗಳ ಬಳಿ ಕೃಷ್ಣನ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದ. ರೈವತಕನ ಮಗಳಾದ ರೇವತಿ ಈತನ ಪತ್ನಿ. ಪ್ರದ್ಯುಮ್ನನ ವಿವಾಹಕಾಲದಲ್ಲಿ ರುಕ್ಮಿಯೊಡನೆ ಜೂಜಾಡುತ್ತಿರುವಾಗ, ಜಗಳವುಂಟಾಗಿ ರುಕ್ಮಿಯನ್ನು ಕೊಂದ. ಜಾಂಬವತಿಯ ಮಗನಾದ ಸಾಂಬ ದುರ್ಯೋಧನನ ಮಗಳಾದ ಲಕ್ಷ್ಮಣೆಯನ್ನು ಅಪಹರಿಸಿ ಕೌರವರಲ್ಲಿ ಬಂಧಿಯಾಗಿದ್ದಾಗ ಹಸ್ತಿನಾವತಿಯನ್ನು ನಿರ್ನಾಮ ಮಾಡುವುದಾಗಿ ಕೌರವರನ್ನು ಬೆದರಿಸಿ ಸಾಂಬನನ್ನು ಕರೆತಂದ. ನರಕಾಸುರನ ಗೆಳಯನಾದ ದ್ವಿವಿದನೆಂಬ ವಾನರ ದ್ವಾರಕೆಯ ಮೇಲೆ ಕಲ್ಲುಮಳೆ ಸುರಿಸಿ ಹಾಳುಮಾಡುತ್ತಿದ್ದಾಗ ಅವನನ್ನು ಕೊಂದ. ಶ್ಯಮಂತಕ ಮಣಿಯ ವಿಚಾರದಲ್ಲಿ ಶ್ರೀಕೃಷ್ಣನೊಂದಿಗೆ ಮನಸ್ತಾಪ ಬರಲು ವಿದೇಹ ದೇಶಕ್ಕೆ ಹೋಗಿ ಅಲ್ಲಿ ದುರ್ಯೋಧನನಿಗೆ ಗದಾವಿದ್ಯೆಯನ್ನು ಕಲಿಸಿದ. ಭೀಮನಿಗು ಸಹ ಈತನೇ ಗದಾವಿದ್ಯೆಯ ಗುರು. ಮದ್ಯಪಾನದಿಂದ ಮತ್ತನಾಗಿ ಗೋಪಿಯರೊಡನೆ ಯುಮುನಾತೀರದಲ್ಲಿ ವಿಹರಿಸುತ್ತಿದ್ದಾಗ ಯುಮನ್ನೆಯನ್ನೆ ಜಲಕ್ರೀಡೆಗಾಗಿ ಕರೆದ. ಆಕೆ ಬಾರದಿರಲಾಗಿ ಕೋಪಗೊಂಡು ನೇಗಿಲ ತುದಿಯಿಂದ ಆಕೆಯನ್ನು ಭೇದಿಸತೊಡಗಿದ. ಯಮುನೆ ಭಯದಿಂದ ಆತನ ಮೊರೆಹೊಕ್ಕು ಆತನಿಗೆ ನೀಲಾಂಬರಾದಿ ಭೂಷಣಗಳನ್ನು ಕಾಣಿಕೆ ಕೊಟ್ಟಳು. ಸುಭದ್ರೆಯನ್ನು ದುರ್ಯೋಧನನಿಗೇ ಕೊಡಬೇಕೆಂದು ಸಂಕಲ್ಪಿಸಿದ್ದನಾದರೂ ಕೃಷ್ಣನ ಚಾತುರ್ಯದಿಂದ ಆಕೆ ಅರ್ಜುನನ ಕೈಹಿಡಿದಳು. ದುರ್ಯೋಧನನ ಮೇಲೆ ಅಭಿಮಾನವಿಟ್ಟಿದ್ದ ಈತ ಇವನಿಗೆ ಭಾರತ ಯುದ್ದದಲ್ಲಿ ಪಾಂಡವರೇ ಗೆಲ್ಲುವರೆಂಬುದು ತಿಳಿದಿದ್ದ ಕಾರಣ ಆ ಯುದ್ದದಲ್ಲಿ ಯಾರಿಗೂ ಸಹಾಯ ಮಾಡಲೊಲ್ಲದ ತೀರ್ಥಯಾತ್ರೆಗೆ ಹೊರಟ. ನೈಮಿಷಾರಣ್ಯಕ್ಕೆ ಹೋಗಿ ಅಲ್ಲಿ ಪುರಾಣಶ್ರವಣ ಮಾಡಿಸುತ್ತಿದ್ದ. ರೋಮಹರ್ಷಣ ಮುನಿ ತನಗೆ ಗೌರವ ಕೊಡಲಿಲ್ಲವೆಂಬ ಕೋಪದಿಂದ ತನ್ನ ಕೈಯಲ್ಲಿದ್ದ ದರ್ಭೆಯಿಂದ ಆತನನ್ನು ಕೊಂದ. ಅಲ್ಲಿ ನೆರೆದಿದ್ದ ಮುನಿಗಳ ಪ್ರಾರ್ಥನೆಯಂತೆ ಮತ್ತೆ ಅವನನ್ನು ಬದುಕಿಸಿದ. ಬ್ರಾಹ್ಮಣನನ್ನು ತಿರಸ್ಕರಿಸಿದ ಪಾಪನಿವಾರಣೆಗಾಗಿ ಆ ಮುನಿಗಳಿಗೆ ಪೀಡೆಯನ್ನು ಉಂಟುಮಾಡುತ್ತಿದ್ದ ಬಲ್ಬಲನೆಂಬ ರಾಕ್ಷಸನನ್ನು ಕೊಂದ. ಹೀಗೆ ಭೂಪ್ರದಕ್ಷಿಣೆ ಮಾಡುತ್ತಾ ಭೀಮಾರ್ಜುನರ ಯುದ್ದವನ್ನು ನಿಲ್ಲಿಸುವುದಕ್ಕಾಗಿ ವೈಶಂಪಾಯನ ಸರೋವರದ ಬಳಿ ಬಂದು ಅವರಿಬ್ಬರಿಗೂ ತಿಳಿಯ ಹೇಳಿದ. ಅದು ವ್ಯರ್ಥವಾಗಿ ಯುದ್ದ ನಡೆದು ದುರ್ಯೋಧನ ತೊಡೆ ಮುರಿದು ಬೀಳಲಾಗಿ ಕೋಪದಿಂದ ಭೀಮನನ್ನು ವಧಿಸುವ ಯತ್ನಮಾಡಿದ. ಕೃಷ್ಣ ಸಮಾಧಾನಪಡಿಸಿ ದ್ವಾರಕೆಗೆ ಕಳಿಸಿದ. ಪ್ರಭಾಸ ಕ್ಷೇತ್ರದಲ್ಲಿ ಯಾದವರೆಲ್ಲರೂ ಪರಸ್ಪರ ಹೊಡೆದಾಡಿ ಮೃತರಾದ ಮೇಲೆ ಸರ್ಪಶರೀರಯಾಗಿ ಸಮುದ್ರ ಪ್ರವೇಶಮಾಡಿದ. ಈತನ ಆಯುರ್ಮಾನ 106 ವರ್ಷ 6 ತಿಂಗಳು ಎಂದಿದೆ. 		  			
	(ವಿ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ